ತಮ್ಮ ಶಿಷ್ಯರು ವಿಶ್ವವಿಖ್ಯಾತರಾಗಬೇಕೆಂದು ಸದಾ ಬಯಸುವ ಈ ಗಾನ ಕೋಗಿಲೆ
ಹಾಡಲು ಮುಂದಾದರೆ ಅದು ಸೂರ್ಯನ ಕಿರಣಕ್ಕೆ ಅರಳಿದ ಮೃದು ತಾವರೆ.
ಪ್ರತೀ ವರ್ಷ ತ್ಯಾಗರಾಜರ ಆರಾಧನೆ ಬಂತೆಂದರೆ ಅದೆಷ್ಟೋ ಕಷ್ಟ ಪಟ್ಟು ಕಲೆ ಹಾಕಿದ
ಘನ ಪಂಚರತ್ನ ಕೃತಿಗಳನ್ನು ಶಿಷ್ಯರಿಗೆ ೨ ತಿಂಗಳ ಹಿಂದಿನಿಂದಲೇ ತಾಲೀಮು ನೀಡಿ
ಎಲ್ಲರು ಸ್ಪಷ್ಟವಾಗಿ ಹಾಡುವಂತೆ ಜಾಗರೂಕತೆಯಿಂದ ಅಭ್ಯಾಸ ಮಾಡಿಸಲು ಗುರುಗಳು
ಸ್ವತಹ ತರಬೇತಿ ನೀಡುವುದನ್ನು ನೋಡುವುದೇ ಒಂದು ಹಬ್ಬ. ನವರಾತ್ರಿ ಮೊದಲಾಗುವ
ಮುನ್ನ ನವರಾಗ ಮಾಲಿಕೆ ಕಾರ್ಯಗಾರ, ದೀಕ್ಷಿತರ ಆರಾಧನೆಗೆ ಅವರ ಪಾಶ್ಚಾತ್ಯ
ಶೈಲಿಯ ಕರ್ನಾಟಕ ಸಂಗೀತ ರಚನೆಗಳಾದ ನೋಟು ಸ್ವರಗಳನ್ನು ಶಿಷ್ಯರಿಗೆ ಪಾಠ
ಮಾಡುವುದರ ಜೊತೆಯಲ್ಲೇ ಪ್ರತಿ ದಿನದ ಸಂಗೀತ ಪಾಠಗಳನ್ನು ರೂಢಿಯಲ್ಲಿ
ನಡೆಸಿಕೊಂಡು ಹೋಗುವ ಅವರ ಸಮಯ ಪಾಲನೆ ಅದ್ವಿತೀಯ. ಈ ಮಹಾನುಭಾವರ
ಕೃಪೆಯಿಂದ ಶಿವಮೊಗ್ಗೆಯ ಜನತೆ ಕರ್ನಾಟಕ ಸಂಗೀತವನ್ನು ಬಹಳ ಸುಲಭವಾಗಿ
ಸವಿಯುವ ವ್ಯವಸ್ಥೆ ಆ ಸಾಯಿ ರಾಮನು ಅನುಗ್ರಹಿಸಿದ್ದಾನೆ. ತಾವು ಸಂಪಾದಿಸಿದ
ಎಲ್ಲ ಹಣವನ್ನು ಕೇವಲ ಸಂಗೀತಕ್ಕಾಗಿಯೇ ವ್ಯಯಿಸುವ ಇಂತಹ ಜೀವ ಇನ್ನೊಂದಿಲ್ಲವೇನೋ
ಈ ಜಗದಲ್ಲಿ. ಶಿಷ್ಯರು ಕೊಟ್ಟ ಸಂಭಾವನೆಯೊಂದಿಷ್ಟು ಒಟ್ಟುಗೂಡಿತೆಂದರೆ ಗುರುಗಳ
ಮನದಲ್ಲಿ ಒಂದು ಆಸೆ ಮೂಡುತ್ತದೆ : -ಹೇಗೂ ಮುಂದಿನ ವಾರ ಆ ಮಹಾನ್
ವಿದ್ವಾಂಸರು ಇದೇ ದಾರಿಯಲ್ಲಿ ದಯಮಾಡಿಸುತ್ತಿದ್ದಾರೆ; ಅವರಿಂದ ಒಂದು ಕಚೇರಿ
ಏರ್ಪಾಡು ಮಾಡೋಣ. ಅಲ್ಲಿಗೆ ಶುರುವಾಯ್ತು ಪೂರ್ತಿ ಕಾರ್ಯಕ್ರಮದ ಏರ್ಪಾಡು.
೧೫ ದಿನಗಳ ಅಂತರದಲ್ಲಿ ಒಬ್ಬ ಹಿರಿಯ ವ್ಯಕ್ತಿ ರಸ್ತೆಯಲ್ಲಿ ಎದುರಾದರೆ ಗುರುಗಳಿಗೆ
ಕೇಳುವ ಒಂದೇ ಪ್ರಶ್ನೆ "ಏನು ಗುರುಗಳೇ ಸದ್ಯಕ್ಕೆ ಯಾವುದು ಕಚೇರಿ ಇಲ್ವಾ?
ಗುರುಗಳ ಉತ್ತರ "ಇದೆ ಇದೆ ಒಂದು ಒಳ್ಳೆ ಕಚೇರಿ ಇದೆ, ಇನ್ವಿಟೇಶನ್ ಕಳಿಸ್ತೀನಿ;
ದಯಮಾಡಿ ಬಂದು ಕೇಳ್ಬೇಕು". ಹೀಗೆ ಸಂಗೀತ ಸೇವೆಯೊಂದೇ ಜೀವನ
ದ್ಯೇಯವೆನ್ನುವ ಗುರುಗಳ ಜೀವನವೇ ಧನ್ಯ ಧನ್ಯ.